ಕೃಷ್ಣ (ರಾಷ್ಟ್ರಕೂಟ) 

ರಾಷ್ಟ್ರಕೂಟ ಮನೆತನದಲ್ಲಿ ಈ ಹೆಸರಿನ ಮೂವರು ಪ್ರಖ್ಯಾತ ದೊರೆಗಳಿದ್ದರು.

ಕೃಷ್ಣ 1: ರಾಷ್ಟ್ರಕೂಟವಂಶದ ಸ್ಥಾಪಕ. ದಂತಿದುರ್ಗನ ಚಿಕ್ಕಪ್ಪ ಮತ್ತು ಉತ್ತರಾಧಿಕಾರಿ. ಇವನ ಆಳ್ವಿಕೆ ಅವಧಿ-756-774. ದಂತಿದುರ್ಗನಿಗೆ ಮಕ್ಕಳಿಲ್ಲದ್ದರಿಂದ ಈತ ಅಧಿಕಾರಕ್ಕೆ ಬಂದ. ಚಾಳುಕ್ಯರಸ ಇಮ್ಮಡಿ ಕೀರ್ತಿವರ್ಮನನ್ನು ಪೂರ್ಣವಾಗಿ ಸೋಲಿಸಿ ಬಹುಶ: ರಣರಂಗದಲ್ಲಿ ಅವನನ್ನೂ ಕೊಂದನೆಂದು ತಿಳಿದುಬರುತ್ತದೆ. ರಾಹಪ್ಪನೆಂಬ ಮತ್ತೊಬ್ಬ ರಾಜನನ್ನು ಸೋಲಿಸಿದುದು ಇವನ ಪ್ರಮುಖ ವಿಜಯಗಳಲ್ಲೊಂದು. ರಾಜ್ಯದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಿದ ತರುವಾಯ ಕೊಂಕಣವನ್ನು ಗೆದ್ದು ಶಿಲಾಹಾರವಂಶದ ಸಣಫುಲ್ಲನನ್ನು ಅಲ್ಲಿ ಸಾಮಂತನಾಗಿ ನೇಮಿಸಿದ. ಅನಂತರ ತಲಕಾಡಿನ ಗಂಗರನ್ನು ಎದುರಿಸಿದಾಗ ಅಲ್ಲಿಯ ದೊರೆ ಶ್ರೀಪುರುಷ ಘೋರ ಹೋರಾಟ ನಡೆಸಿದ. ಅವರ ರಾಜಧಾನಿ ಮಾನ್ಸಪುರ (ಈಗಿನ ಮಣ್ಣಿ, ಬೆಂಗಳೂರು ಜಿಲ್ಲೆ) ವಶವಾದರೂ, ಶ್ರೀಪುರುಷನನ್ನು ತನ್ನ ಸಾಮಂತನನ್ನಾಗಿ ನೇಮಿಸಿದ. ಈ ವಿಜಯ ಗಳಿಸಿದ್ದು 768ರಲ್ಲಿ. ಇವನ ಮಗ ಇಮ್ಮಡಿ ಗೋವಿಂದನ ನೇತೃತ್ವದಲ್ಲಿ 769ರಲ್ಲಿ ವೆಂಗಿಯ ಮೇಲೂ ಜಯ ಲಭ್ಯವಾಯಿತು.
ಕೃಷ್ಣ ಅಧಿಕಾರಕ್ಕೆ ಬಂದಾಗ ಮುದುಕನಾಗಿದ್ದರೂ ಈತ ಸಾಮ್ರಾಜ್ಯದ ಮೇರೆಗಳನ್ನು ವಿಸ್ತರಿಸಿ, ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಿ, ರಾಷ್ಟ್ರಕೂಟ ಸಾಮ್ರಾಜ್ಯವನ್ನು ಬಲಗೊಳಿಸಿದ. ಧರ್ಮ, ಸಾಹಿತ್ಯ ಮತ್ತು ಕಲೆಗಳಿಗೆ ಪ್ರೋತ್ಸಾಹ ನೀಡಿದ. ಎಲ್ಲೋರದ ಕೈಲಾಸ ದೇವಾಲಯ ಇವನ ಕಾಲದ ವಾಸ್ತುಕೃತಿಗಳಲ್ಲಿ ಅತ್ಯಂತ ಪ್ರಮುಖವಾದ್ದು. (ನೋಡಿ- ಎಲ್ಲೋರ)

ಕೃಷ್ಣ 2: ಆಳ್ವಿಕೆಯ ಕಾಲ 878-914 ಮುಮ್ಮಡಿ ಗೋವಿಂದನ ತರುವಾಯ ಅಧಿಕಾರಕ್ಕೆ ಬಂದ. ಇವನ ಆಳ್ವಿಕೆಯ ಹೆಚ್ಚು ಕಾಲ ಯುದ್ಧರಂಗದಲ್ಲಿ ಕಳೆಯಿತು. ಉತ್ತರದಲ್ಲಿ ಗೂರ್ಜರ ಪ್ರತೀಹಾರರು ಪ್ರಬಲರಾಗಿದ್ದು ರಾಷ್ಟ್ರಕೂಟ ರಾಜ್ಯದ ಮೇಲೆ ದಾಳಿ ಮಾಡಿದರು. ಆ ವಂಶದ ಭೋಜನ ಸೈನ್ಯವನ್ನು ನರ್ಮದೆಯ ತೀರದಲ್ಲಿ ಎದುರಿಸಿದಾಗ ಕೃಷ್ಣ ಸೋಲನ್ನನುಭವಿಸಬೇಕಾಯಿತು. ಭೋಜನ ಸೈನ್ಯ ಗುಜರಾತಿಗೆ ನುಗ್ಗಲು, ಅಲ್ಲಿಯ ರಾಷ್ಟ್ರಕೂಟ ಸಾಮಂತ ಇಮ್ಮಡಿ ಕೃಷ್ಣ ಭೋಜನನ್ನು ಸೋಲಿಸಿ ತನ್ನ ಸಾಮ್ರಾಟನ ಗೌರವ ಉಳಿಸಿದ.

ವೆಂಗಿಯ ಚಾಳುಕ್ಯರು ರಾಷ್ಟ್ರಕೂಟದ ಶತ್ರುಗಳಾಗಿದ್ದರು. ವೆಂಗಿಯ ಗುಣಗ ವಿಜಯಾದಿತ್ಯ ಈ ಸಂದರ್ಭವನ್ನು ಉಪಯೋಗಿಸಿಕೊಂಡು ರಾಷ್ಟ್ರಕೂಟರ ಮೇಲೆರಗಿದ. ಯುದ್ಧದಲ್ಲಿ ಸೋತ ಕೃಷ್ಣ ತನ್ನ ಮಾವ ಚೇದಿರಾಜ ಕೊಕ್ಕಲ್ಲನ ಆಶ್ರಯ ಪಡೆಯಬೇಕಾಯಿತು. ವೆಂಗಿ ಚಾಳುಕ್ಯರಿಂದ ರಾಷ್ಟ್ರಕೂಟರು ಗೆದ್ದಿದ್ದ ಎಲ್ಲ ಪ್ರದೇಶಗಳೂ ಚಾಳುಕ್ಯರ ವಶವಾದುವು. ಆದರೆ 891ರಲ್ಲಿ ಗುಣಗ ವಿಜಯಾದಿತ್ಯನ ಮರಣಾನಂತರ ವೆಂಗಿಯ ಮೇಲೆ ದಾಳಿ ಮಾಡಿ, ಹೊಸ ದೊರೆ ಭೀಮನನ್ನು ಸೆರೆಹಿಡಿದುದಲ್ಲದೆ ಇಡೀ ವೆಂಗಿ ಸ್ವತಂತ್ರವಾಗಿರಬೇಕೆಂದೂ ಮತ್ತೆ ಯುದ್ಧ ಮುಂದುವರಿಸಬಾರದೆಂದೂ ಒಪ್ಪಿಕೊಂಡಂತೆ ಕಾಣುತ್ತದೆ. 

ದಕ್ಷಿಣದಲ್ಲಿ ಆ ವೇಳೆಗೆ ಪಲ್ಲವರು ಅವನತಿಯಲ್ಲಿದ್ದು ಚೋಳರು ಪ್ರಬಲರಾಗುತ್ತಿದ್ದರು.  ಕೃಷ್ಣ ಅವರೊಂದಿಗೆ ಸ್ನೇಹ ಬೆಳೆಸಿ ಆ ವಂಶದ 1ನೆಯ ಆದಿತ್ಯನಿಗೆ ತನ್ನ ಮಗಳನ್ನು ವಿವಾಹ ಮಾಡಿ ಕೊಟ್ಟಿದ್ದ. ಆದರೆ ತನ್ನ ಮೊಮ್ಮಗ (ಆದಿತ್ಯನ ಮಗ) ಕನ್ನರನ ಪರವಹಿಸಿ ಅವನ ಮಲತಮ್ಮ 1ನೆಯ ಪರಾಂತಕನೊಂದಿಗೆ ರಾಜ್ಯಕ್ಕಾಗಿ ಹೋರಾಡಬೇಕಾಯಿತು. 911ರಲ್ಲಿ ತಿರುವಳ್ಳಂನಲ್ಲಿ ನಡೆದ ಕದನದಲ್ಲಿ ಕೃಷ್ಣ ಸೋತ, 

	2ನೆಯ ಕೃಷ್ಣ ಗುಜರಾತಿನ ಅರಬರೊಡನೆ ಸ್ನೇಹ ಗಳಿಸಿದ್ದ. ಈತ ಸಾಹಸಿ ಮತ್ತು ವೀರನಾಗಿದ್ದರೂ ಇವನ ಆಳ್ವಿಕೆ ಫಲದಾಯಕವಾಗಲಿಲ್ಲ. ಈತ ಮಹತ್ತ್ವಾಕಾಂಕ್ಷಿಯಾದರೂ ಈತನ ಉದ್ಯಮಗಳೆಲ್ಲ ವಿಫಲಗೊಂಡುವು. ಶತ್ರುಗಳು ಸುತ್ತುವರಿದಿದ್ದರೂ ಎಲ್ಲ ಯುದ್ಧಗಳಲ್ಲೂ ಈತ ಸೋಲನ್ನನುಭವಿಸಿದರೂ ಸಾಮ್ರಾಜ್ಯದ ಮೇರೆಗಳನ್ನು ರಕ್ಷಿಸಿಕೊಂಡು ಬಂದದ್ದು ಇವನ ಸಾಹಸಕ್ಕೆ ಸಾಕ್ಷಿ. ಈತ ಜೈನಧರ್ಮಾನುರಾಗಿ ಜೈನ ವಿದ್ವಾಂಸ ಗುಣಭದ್ರನ ಶಿಷ್ಯ.

ಕೃಷ್ಣ 3: ಆಳ್ವಿಕೆಯ ಕಾಲ 939-967. ಮೂರನೆಯ ಅಮೋಘವರ್ಷನ ಮಗ; ಅವನ ಅನಂತರ ಬಂದ ದೊರೆ. ಅಮೋಘವರ್ಷ ಮುಪ್ಪಿನಲ್ಲಿ ಸಿಂಹಾಸನಕ್ಕೆ ಬಂದಾಗ (935) 3ನೆಯ ಕೃಷ್ಣ ಯುವರಾಜ ಪದವಿಯಲ್ಲಿದ್ದುಕೊಂಡು ತಂದೆಯ ಪರವಾಗಿ ಆಡಳಿತ ನಿರ್ವಹಿಸುತ್ತಿದ್ದ. ತನ್ನ ತಂದೆಯ ಶತ್ರುಗಳಾಗಿದ್ದ ಅಚಲಾಪುರದ ದಂತಿಗ ಮತ್ತು ವಪ್ಪುಕರನ್ನು ಸದೆಬಡಿದುದಲ್ಲದೆ ತನ್ನ ತಂದೆಯ ಆಪ್ತನಾದ ಗಂಗವಂಶದ ಇಮ್ಮಡಿ ಬೂತುಗನಿಗೆ ರಾಜ್ಯ ದೊರಕಿಸಿಕೊಡಲು ಗಂಗವಾಡಿಯ ಮೇಲೆ ನುಗ್ಗಿದ. ನೊಳಂಬ ರಾಜ ಅಣ್ಣಿಗನ ಸಹಾಯ ಪಡೆದ ಗಂಗರ ದೊರೆ ರಾಚಮಲ್ಲನನ್ನು ಯುದ್ಧದಲ್ಲಿ ಕೊಂದು, ಅಣ್ಣಿಗನನ್ನು ಹೊಡೆದೋಡಿಸಿ, ಬೂತುಗನನ್ನು ಸಿಂಹಾಸನಕ್ಕೇರಿಸಿದ. ಮಹತ್ತ್ವಾಕಾಂಕ್ಷಿಯಾದ ಕೃಷ್ಣ ರಾಷ್ಟ್ರಕೂಟರ ವೈವಾಹಿಕ ಸಂಬಂಧಿಗಳೂ ದೀರ್ಘಕಾಲದ ಮಿತ್ರರೂ ಆದ ಚೇದಿ ಕಳಚುರಿಗಳ ಮೇಲೆ ಕದನ ಹೂಡಿ, ಆ ವಂಶದ ಸಾಹಸತುಂಗನನ್ನು ಸೋಲಿಸಿದ್ದರಿಂದ ಅವರ ಹಗೆತನ ಕಟ್ಟಿಕೊಳ್ಳಬೇಕಾಯಿತು. ಅನಂತರ ಉತ್ತರದ ಕಡೆ ನುಗ್ಗಿ ಗೂರ್ಜರ ಪ್ರತೀಹಾರರನ್ನು ಸೋಲಿಸಿ ಅವರಿಂದ ಚಿತ್ರಕೂಟ ಮತ್ತು ಕಾಲಿಂಜರ ಕೋಟೆಗಳನ್ನು ವಶಪಡಿಸಿಕೊಂಡ. 939 ರಲ್ಲಿ ಅಮೋಘ ವರ್ಷ ಮೃತನಾದಾಗ ಮುಮ್ಮಡಿ ಕೃಷ್ಣ ಸಿಂಹಾಸನಕ್ಕೆ ಬಂದ. ಒಡನೆಯೇ ಗಂಗಬೂತುಗನ ಸಹಾಯದಿಂದ ಲಲ್ಲೆಯನೆಂಬ ಪ್ರತಿಸ್ಪರ್ಧಿಯೊಡನೆ ಹೋರಾಡಿ ವಿಜಯ ಗಳಿಸಿದ. ತರುವಾಯ ಆಡಳಿತವನ್ನು ವ್ಯವಸ್ಥೆಗೊಳಿಸಿ ತನ್ನ ಅಧಿಕಾರವನ್ನು ಸುಭದ್ರಗೊಳಿಸಿಕೊಂಡ.

	ದಕ್ಷಿಣದಲ್ಲಿ ಚೋಳ ದೊರೆ 1ನೆಯ ಪರಾಂತಕ ಪ್ರಬಲನಾಗುತ್ತಿದ್ದು, ಕೃಷ್ಣನ ಪೂರ್ವಜರನ್ನು ಸೋಲಿಸಿ ರಾಷ್ಟ್ರಕೂಟ ಕುಲಕ್ಕೆ ಕಳಂಕ ತಂದಿದ್ದ. ಮತ್ತೆ ಮುಮ್ಮಡಿ ಕೃಷ್ಣನ ಪ್ರತಿಸ್ಪರ್ಧಿಯಾದ ರಾಷ್ಟ್ರಕೂಟ ನಾಲ್ಮಡಿ ಗೋವಿಂದನಿಗೆ ಆತ ಆಶ್ರಯವನ್ನೂ ನೀಡಿದ್ದ. ಕೃಷ್ಣ ತನ್ನ ಸಮರ್ಥ ಸಾಮಂತನಾಗಿದ್ದ ಗಂಗಬೂತುಗನೊಡನೆ ಚೋಳ ರಾಜ್ಯದ ಮೇಲೆ ನುಗ್ಗಿದ. ಚೋಳರ ಸೈನ್ಯ ಯುವರಾಜ ರಾಜಾದಿತ್ಯನ ನಾಯಕತ್ವದಲ್ಲಿ ಈಗಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿರುವ ತೆಕ್ಕೋಲಂ ಎಂಬಲ್ಲಿ ರಾಷ್ಟ್ರಕೂಟರನ್ನು ಎದುರಿಸಿತು. ಆ ಯುದ್ಧದಲ್ಲಿ ರಾಜಾದಿತ್ಯ ಮಡಿದ. ರಾಷ್ಟ್ರಕೂಟರಿಗೆ ವಿಜಯ ಲಭಿಸಿತು. ತಂಜಾವೂರುವರೆಗಿನ ಚೋಳರ ಪ್ರದೇಶಗಳು ರಾಷ್ಟ್ರಕೂಟರ ವಶವಾದುವು. ಕೃಷ್ಣ ತನ್ನ ಸೈನ್ಯದೊಡನೆ ದಕ್ಷಿಣ ದಿಕ್ಕಿನಲ್ಲಿ ಮುಂದುವರಿದು, ಪಾಂಡ್ಯರನ್ನು ಸೋಲಿಸಿ ರಾಮೇಶ್ವರದವರೆಗೂ ನುಗ್ಗಿ ಅಲ್ಲಿ ತನ್ನ ವಿಜಯಸ್ತಂಭವನ್ನು ಸ್ಥಾಪಿಸಿದ. ತಮಿಳು ದೇಶದಲ್ಲಿ ಆಡಳಿತವನ್ನು ವ್ಯವಸ್ಥೆಗೊಳಿಸಿ, ತರುವಾಯ ಹಿಂದಿರುಗಿದ. ಯುದ್ಧದಲ್ಲಿ ಅಮೋಘ ನೆರವು ನೀಡಿದ ಬೂತುಗನಿಗೆ ಬನವಾಸಿ, ಬೆಳ್ವೊಲ ಮತ್ತು ಪುರಿಗೆರೆ ಪ್ರಾಂತ್ಯಗಳು ಬಳುವಳಿಯಾಗಿ ದೊರೆತುವು. ಉತ್ತರದಲ್ಲಿ ಈ ಮಧ್ಯೆ ರಾಷ್ಟ್ರಕೂಟದ ವಶದಲ್ಲಿದ್ದ ಚಿತ್ರಕೂಟ ಮತ್ತು ಕಾಲಂಜರ ಕೋಟೆಗಳನ್ನು ಚಂದೇಲರು ವಶಪಡಿಸಿಕೊಂಡದ್ದರಿಂದಲೂ ಗೂರ್ಜರ ಪ್ರತೀಹಾರರು ಪ್ರಬಲರಾಗುತ್ತಿದ್ದುದರಿಂದಲೂ ಕೃಷ್ಣ ಆ ಕಡೆ ಗಮನ ಕೊಡಬೇಕಾಯಿತು. ಬೂತುಗನ ಮಗ ಮಾರಸಿಂಹನ ನೇತೃತ್ವದಲ್ಲಿ ಹೊರಟ ರಾಷ್ಟ್ರಕೂಟ ಸೈನ್ಯ ಗೂರ್ಜರ ಪ್ರತೀಹಾರ ರಾಜ್ಯದ ಪಶ್ಚಿಮ ಭಾಗವನ್ನು ವಶಪಡಿಸಿಕೊಂಡಿದ್ದರಿಂದ ಗೂರ್ಜರಾಧಿರಾಜನೆಂಬ ಬಿರುದು ಅವನಿಗೆ ಲಭ್ಯವಾಯಿತು. ಪರಮಾರ ಮನೆತನದ ಸೀಯಕ ಹರ್ಷನನ್ನು ಕೃಷ್ಣ ಸೋಲಿಸಿ ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿದ.

ಪೂರ್ವದಲ್ಲಿ ವೆಂಗಿ ರಾಜ್ಯದಲ್ಲಿ ಪುನ: ಅಂತ:ಕಲಹಗಳು ತಲೆದೋರಿದುವು. ಚಾಳುಕ್ಯ ಇಮ್ಮಡಿ ಭೀಮನ ಮರಣಾನಂತರ ಅವನ ಮಕ್ಕಳಾದ ಅಮ್ಮ ಮತ್ತು ದಾನಾರ್ಣವರಲ್ಲಿ ಸಿಂಹಾಸನಕ್ಕಾಗಿ ಹೊಡೆದಾಟ ನಡೆಯುತ್ತಿದ್ದಾಗ ಬಾಡಪನೆಂಬ ಮತ್ತೊಬ್ಬ ಅಭ್ಯರ್ಥಿಯ ಪರವಾಗಿ ಅಲ್ಲಿಯ ಹೋರಾಟದಲ್ಲಿ ಕೃಷ್ಣ ಪ್ರವೇಶಿಸಿ, ಬಾಡಪನಿಗೆ ರಾಜ್ಯವನ್ನು ಗಳಿಸಿಕೊಟ್ಟ. ಅಮ್ಮ ಯುದ್ದವನ್ನು ಮುಂದುವರಿಸಿ ಬಾಡಪನ ತಮ್ಮ ಇಮ್ಮಡಿ ತೈಲನನ್ನು ಪದಚ್ಯುತನನ್ನಾಗಿ ಮಾಡಿದಾಗ ಪುನ: ಕೃಷ್ಣ ಪ್ರವೇಶಿಸಿ ಅಮ್ಮನನ್ನು ಸೋಲಿಸಿ ಓಡಿಸಿದ್ದಲ್ಲದೆ ವೆಂಗಿಯ ಸಿಂಹಾಸನವನ್ನು ಮತ್ತೊಬ್ಬ ಅಭ್ಯರ್ಥಿಯಾಗಿದ್ದ ದಾನಾರ್ಣವನಿಗೆ ಕೊಡಿಸಿದ.

ಕೃಷ್ಣ ರಾಷ್ಟ್ರಕೂಟರ ಅತ್ಯಂತ ಸಮರ್ಥ ದೊರೆಗಳಲ್ಲೊಬ್ಬ; ಧೀರಯೋಧ, ಚತುರ ಆಡಳಿತಗಾರ ಮತ್ತು ಪ್ರತಿಭಾವಂತ ರಾಜನೀತಿಜ್ಞ. ಈತ ಸು.ಮೂರು ದಶಕಗಳ ಕಾಲ ಸೋಲನ್ನರಿಯದ ಅರಸನಾಗಿದ್ದು ತನ್ನ ಮನೆತನದ ಸರ್ವತೋಮುಖ ಪ್ರಗತಿಗೆ ಮುಖ್ಯ ಕಾರಣನಾಗಿದ್ದುದಲ್ಲದೆ ಅಂದಿನ ಭಾರತದಲ್ಲಿ ಅಸಮಾನ ವೀರಯೋಧನಾಗಿದ್ದ. ಶೀಘ್ರಗತಿಯಲ್ಲಿ ಬೆಳೆಯತ್ತಿದ್ದ ಚೋಳರನ್ನು ಸದೆಬಡಿದಿದ್ದು ಇವನ ಸಾಧನಗೆಗಳಲ್ಲಿ ಪ್ರಮುಖವಾದ್ದು. 967ರಲ್ಲಿ ಈತ ಮೃತನಾದಾಗ ರಾಷ್ಟ್ರಕೂಟ ರಾಜ್ಯ ಅತ್ಯಂತ ಉಚ್ಚ್ರಾಯ ಸ್ಥಿತಿಯಲ್ಲಿತ್ತು.              						
	 (ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ